ಇರಾಂತಿಮಮ್
ಆಕ್ಯಾಂತೇಸಿ ಕುಟುಂಬಕ್ಕೆ ಸೇರಿದ ಒಂದು ಜಾತಿ, ಉಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇರಾಂತಿಮಮ್‍ಎಂದರೆ ಸುಂದರ ಪುಷ್ಪ್ಪವೆಂದೇ ಅರ್ಥ. ಈ ಸಸ್ಯವನ್ನು ಕುಂಡ, ಅಂಚು, ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಎಲೆಗಳು ಪ್ರಭೇದಗಳಿಗೆ ಅನುಸಾರವಾಗಿ ಕೆಂಪು, ಹಸಿರಿನ ಮೇಲೆ ಬಿಳುವು ಹಳದಿ ಮತ್ತು ಇತರ ಬಣ್ಣದ ಮಚ್ಚೆಗಳಿಂದ ಕೂಡಿದ್ದು ಬಹಳ ಸುಂದರವಾಗಿ ಕಾಣುತ್ತವೆ.

ಎಲೆಯ ಆಕಾರ ಕರನೆಯಂತೆ, ನಾಳರಚನೆ ಗರಿರೂಪದ್ದು. ಅಂಚು ನಯ ಇಲ್ಲವೆ ಗರಗಸದ ಹಲ್ಲಿನಂತೆ, ಹೂಗೊಂಚಲು ಸ್ಪೈಕ್ ಮಾದರಿಯದು, ಹೂಬಣ್ಣ ನೀಲಿ ಇಲ್ಲವೆ ಕಿತ್ತಳೆ. ಹೂದಳಗಳು ಕೂಡಿವೆ. ಹೂವಿನ ಆಕಾರ ಕೊಳವೆಯಂತೆ, ತುದಿ ವಿಶಾಲವಾಗಿ ಹರಡಿ ಐದು ಭಾಗಗಳಾಗಿ ಒಡೆದಿದೆ. ಪುಷ್ಪಪತ್ರ ಉಪದಳಗಳಿಂದ ಆವೃತ. ಹೂದಳದ ಮೇಲೆ ಅಂಟಿರುವ ಎರಡು ಕೇಸರಗಳಿವೆ. ದೀರ್ಘವೃತ್ತಾಕಾರ ಅಥವಾ ಆಯತಾಕಾರದ ಮೇಲು ಅಂಡಾಶಯ ನಾಲ್ಕು ಬೀಜವಿರುವ ಕ್ಯಾಪ್ಸೂಲ್ ಮಾದರಿಯದು. ಕಾಂಡದ ತುಂಡುಗಳಿಂದ ಹೊಸ ಗಿಡಗಳನ್ನು ಪಡೆಯಬಹುದು. ಜೌಗಿಲ್ಲದ ಒಳ್ಳೆಯ ನೆಲದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅರ್ಧ ನೆರಳಿದ್ದರಂತೂ ಇನ್ನೂ ಹಸನು.

 ಇರಾಂತಿಮಮ್ ಎಲ್ಡೂರ್ಯಾಡೊ ಪ್ರಭೇದವೂ 2 ಅಡಿ ಎತ್ತರ ಬೆಳಯುತ್ತದೆ. ಹಳದಿ ಮಚ್ಚೆ ಮತ್ತು ಹಸಿರು ನಾಳಗಳಿರುವ ಎಲೆಗಳು ಬಹಳ ಸುಂದರವಾಗಿವೆ. ಇರಾಂತಿಮಮ್‍ನೊಬಿಲಿಸ್ ಪ್ರಭೇದ 3-4 ಅಡಿ ಎತ್ತರ ಬೆಳೆಯುತ್ತದೆ. ಅತಿ ಹಸಿರಾದ ಎಲೆಗಳಲ್ಲಿ ಹಳದಿ ಬಣ್ಣದ ನಾಳಗಳಿರುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ.

ಇರಾಂತಿಮಮ್ ವರ್‍ಸಿಕೊಲೊರ್ ಪ್ರಭೇದದ ಎಲೆಗಳಲ್ಲಿ ಬಿಳಿಯ ಮತ್ತು ಹಸಿರು ಬಣ್ಣದ ಮಚ್ಚೆಗಳಿವೆ.

ಇರಾಂತಿಮಮ್‍ಆಟ್ರೊಪರ್ಪ್ಯೂರಿಯಮ್ ಪ್ರಭೇದದ ಎಲೆಗಳ ಮೇಲೆ ಕೆಂಚು ಅಥವಾ ಕಡುಗೆಂಪು ಬಣ್ಣದ ಮಚ್ಚೆಗಳಿವೆ.
												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ